ಉಮ್ಮನ್ ಚಾಂಡಿ (31 ಅಕ್ಟೋಬರ್ 1943 - 18 ಜುಲೈ 2023) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, 2004 ರಿಂದ 2006 ರವರೆಗೆ ಮತ್ತು 2011 ರಿಂದ 2016 ರವರೆಗೆ ಕೇರಳದ 10 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1970 ರಿಂದ 2023 ರಲ್ಲಿ ಅವರು ನಿಧನರಾಗುವವರೆಗೆ ಕೇರಳ ವಿಧಾನಸಭೆಯಲ್ಲಿ ಶಾಸಕರಾಗಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದರು. ಅವರು ಕೇರಳ ವಿಧಾನಸಭೆಯಲ್ಲಿ ಸುದೀರ್ಘ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ ಮತ್ತು ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ ಭಾರತದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ಜೂನ್ 6, 2018 ರಂದು, ಕಾಂಗ್ರೆಸ್ ಪಕ್ಷದ ಅಂದಿನ ಅಧ್ಯಕ್ಷ ರಾಹುಲ್ ಗಾಂಧಿ, ಉಮ್ಮನ್ ಚಾಂಡಿ ಅವರನ್ನು ಆಂಧ್ರಪ್ರದೇಶದ ಉಸ್ತುವಾರಿ ವಹಿಸಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದರು. ಜೀವಮಾನದ ತಮ್ಮ ಕೊನೆಯ ದಿನಗಳಲ್ಲಿ ಚಾಂಡಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಅವರು ಜುಲೈ 18, 2023 ರಂದು ನಿಧನರಾದರು. == ಬಾಲ್ಯ ಮತ್ತು ಶಿಕ್ಷಣ == ಉಮ್ಮನ್ ಚಾಂಡಿಯವರು ಅಕ್ಟೋಬರ್ 31, 1943 ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿಯಲ್ಲಿ ಜನಿಸಿದರು. ಚಾಂಡಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ಕೇರಳದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಕೇರಳ ವಿದ್ಯಾರ್ಥಿ ಒಕ್ಕೂಟದ (ಕೆಎಸ್‌ಯು) ಕಾರ್ಯಕರ್ತರಾಗಿ ರಾಜಕೀಯ ಪ್ರವೇಶಿಸಿದರು. ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಹೈಸ್ಕೂಲ್‌ನಲ್ಲಿ ಕೆಎಸ್‌ಯು ಘಟಕದ ಅಧ್ಯಕ್ಷರಾಗಿದ್ದ ಅವರು ಬಳಿಕ ಸಂಘಟನೆಯ ರಾಜ್ಯಾಧ್ಯಕ್ಷರಾದರು. ಚಾಂಡಿ ಅವರು ಕೊಟ್ಟಾಯಂನ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದರು ಮತ್ತು ಚಂಗನಾಸ್ಸೆರಿಯ ಸೇಂಟ್ ಬರ್ಚ್‌ಮ್ಯಾನ್ಸ್ ಕಾಲೇಜಿನಲ್ಲಿ . ಅರ್ಥಶಾಸ್ತ್ರವನ್ನು ಪೂರ್ಣಗೊಳಿಸಿದರು. ನಂತರ, ಅವರು ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ (.) ಪಡೆದರು. == ರಾಜಕೀಯ ಜೀವನ == ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಉಮ್ಮನ್ ಚಾಂಡಿ, 1967 ರಿಂದ 1969 ರವರೆಗೆ ಆ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ 1970 ರಲ್ಲಿ ಕೇರಳ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ವರ್ಷ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಅವರು, 1970, 1977, 1980, 1982, 1987, 1991, 1996, 2001, 2006, 2011, 2016 ಮತ್ತು 2021ರಲ್ಲಿ ಸತತವಾಗಿ ಕೇರಳ ವಿಧಾನಸಭೆಗೆ ಆಯ್ಕೆಯಾದರು. 5 ದಶಕಗಳ ಕಾಲ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ ಅವರು, 1996–98ರ ಅವಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. === ಮಂತ್ರಿಯಾಗಿ ಉಮ್ಮನ್ ಚಾಂಡಿ === ಚಾಂಡಿ ಅವರು ನಾಲ್ಕು ಬಾರಿಗೆ ಕೇರಳ ಸರ್ಕಾರದಲ್ಲಿ ಸಚಿವರಾಗಿದ್ದರು. ಮೊದಲ ಬಾರಿಗೆ ಕೆ. ಕರುಣಾಕರನ್ ಮಂತ್ರಿಮಂಡಲದಲ್ಲಿ 11 ಏಪ್ರಿಲ್ 1977 ರಿಂದ 25 ಏಪ್ರಿಲ್ 1977 ರವರೆಗೆ ಕಾರ್ಮಿಕ ಸಚಿವರಾಗಿದ್ದರು. ಬಳಿಕ, ಎ.ಕೆ. ಆಂಟನಿ ಅವರ ಮಂತ್ರಿಮಂಡಲದಲ್ಲಿ 27 ಅಕ್ಟೋಬರ್ 1978 ರವರೆಗೆ ಅದೇ ಖಾತೆಯನ್ನು ಮುಂದುವರೆಸಿದರು. ನಂತರ, ಕೆ. ಕರುಣಾಕರನ್ ಅವರ ಸಚಿವಾಲಯದಲ್ಲಿ ಗೃಹ ಖಾತೆಯನ್ನೂ ನಿರ್ವಹಿಸಿದ್ದರು. ಬಳಿಕ, ಕೆ. ಕರುಣಾಕರನ್ ಅವರ ನಾಲ್ಕನೇ ಸಚಿವಾಲಯದಲ್ಲಿ ಅವರು 2 ಜುಲೈ 1991 ರಂದು ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗ ಅವರು ಹಣಕಾಸು ಖಾತೆಯ ಉಸ್ತುವಾರಿ ವಹಿಸಿದ್ದರು. ಆದರೆ, ನಂತರ ಕರುಣಾಕರನ್ ಅವರು ತಮ್ಮ ಬಣದ ನಾಯಕನಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿದ ಕಾರಣ, ಅದರ ವಿರುದ್ಧ ಪ್ರತಿಭಟನೆಯಾಗಿ 22 ಜೂನ್ 1994 ರಂದು ಸಂಪುಟದಿಂದ ರಾಜೀನಾಮೆ ನೀಡಿದರು. ಚಾಂಡಿ ಅವರು ಈ ಕೆಳಗಿನ ಸಚಿವಾಲಯಗಳಲ್ಲಿ ಸಚಿವರಾಗಿದ್ದರು: === ಮುಖ್ಯಮಂತ್ರಿಯಾಗಿ ಮೊದಲ ಅವಧಿ (2004-2006) === ಮೇ 2004 ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ, ಕೇರಳದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎ.ಕೆ. ಆಂಟೋನಿ ಅವರು ರಾಜೀನಾಮೆ ನೀಡಲು ಮತ್ತು ಕಳಪೆ ಫಲಿತಾಂಶಗಳ ಹೊಣೆಗಾರಿಕೆಯನ್ನು ಸ್ವೀಕರಿಸಲು ಒತ್ತಾಯಿಸಲಾಯಿತು.30 ಆಗಸ್ಟ್ 2004 ರಂದು, ವೀಕ್ಷಕರ ಸಭೆಯ ಕೊನೆಯಲ್ಲಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಮತಿಯ ಮೇರೆಗೆ ಚಾಂಡಿಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಹೀಗಿದ್ದರೂ, 2006ರ ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಕೇವಲ 42 ಸ್ಥಾನಗಳನ್ನು ಪಡೆಯಲು ಸಫಲವಾಯಿತು. ಅವರು 12 ಮೇ 2006 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. === ವಿರೋಧ ಪಕ್ಷದ ನಾಯಕ === ಚಾಂಡಿ ಹನ್ನೆರಡನೇ ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ, 2009 ರ ಲೋಕಸಭಾ ಚುನಾವಣೆಯಲ್ಲಿ ವಿಜಯಗಳನ್ನು ಗುರುತಿಸಿತು, ಕೇರಳದ 20 ಸಂಸತ್ತಿನ ಕ್ಷೇತ್ರಗಳಲ್ಲಿ 16 ಅನ್ನು ಗಳಿಸಿತು. ಕೇರಳ ರಾಜಕೀಯದ ಇತಿಹಾಸದಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದು ಇದೇ ಮೊದಲು.[ಉಲ್ಲೇಖದ ಅಗತ್ಯವಿದೆ] === ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ === 2011 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇರಳದಲ್ಲಿ ಬಹುಮತವನ್ನು ಪಡೆಯುವಲ್ಲಿ ಸಫಲವಾಯಿತು. ಕಾಂಗ್ರೆಸ್ ನ ಶಾಸಕಾಂಗ ಪಕ್ಷವು ಉಮ್ಮನ್ ಚಾಂಡಿಯನ್ನು ತಮ್ಮ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಉಮ್ಮನ್ ಚಾಂಡಿ ಅವರ ಹೆಸರನ್ನು ರಮೇಶ್ ಚೆನ್ನಿತ್ತಲ ಪ್ರಸ್ತಾಪಿಸಿದರು ಮತ್ತು ಆರ್ಯಾದನ್ ಮೊಹಮ್ಮದ್ ಅವರು ಅನುಮೋದಿಸಿದರು. === ಮುಖ್ಯಮಂತ್ರಿಯಾಗಿ ಎರಡನೇ ಅವಧಿ (2011-2016) === ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್, 2011 ರ ಏಪ್ರಿಲ್ 13 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 72 ಸ್ಥಾನಗಳನ್ನು ಗೆಲ್ಲುವ ಮೂಲಕ, 68 ಸ್ಥಾನಗಳನ್ನು ಗೆದ್ದ ಎಲ್‌ಡಿಎಫ್‌ ವಿರುದ್ಧ ಅಲ್ಪ ಬಹುಮತದ ಅಂತರವನ್ನು ಪಡೆದುಕೊಂಡಿತು. ಅವರು ತಮ್ಮ ಸಂಪುಟದ ಇತರ ಆರು ಮಂತ್ರಿಗಳೊಂದಿಗೆ 18 ಮೇ 2011 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ, ಹದಿಮೂರು ಇತರ ಮಂತ್ರಿಗಳನ್ನು ಸಹ ಅವರ ಕ್ಯಾಬಿನ್‌ಗೆ ಸೇರಿಸಿಕೊಳ್ಳಲಾಯಿತು. == ಉಲ್ಲೇಖಗಳು ==